ರಾಹುಲ್ ಗಾಂಧಿ ಇಂದ ಕಾಂಗ್ರೆಸ್ ಪಕ್ಷದ 5ನೇ ಗ್ಯಾರಂಟಿ ಘೋಷಣೆ
ಬೆಂಗಳೂರು : ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷ, ತನ್ನ ಗ್ಯಾರಂಟಿ ಘೋಷಣೆಗಳನ್ನು ಮುಂದುವರೆಸಿದೆ.
ಮಂಗಳೂರಿನಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ 5ನೇ ಗ್ಯಾರಂಟಿ ಘೋಷಣೆಯನ್ನು ನೀಡಿದರು. ಕಾಂಗ್ರೆಸ್ ಪಕ್ಷ ಗೆದ್ದು ಬಂದರೆ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಸೇವೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒಂದೊಳ್ಳೆ ನಿರ್ಧಾರ. ಬೆಲೆ ಏರಿಕೆ ಮತ್ತು ಜನರ ಜೀವನ ಗುಣಮಟ್ಟ ಇಳಿಮುಖವಾಗುತ್ತಿರುವ ವೇಳೆ ಜನಪರ ಯೋಜನೆಗಳು ಅಗತ್ಯವಾಗಿವೆ. ಇದನ್ನು ಕಾಂಗ್ರೆಸ್ ಮನಗಂಡಿರುವಂತಿದೆ.
ಮಹಿಳೆಗೆ ಮನೆಗೆಲಸವೇ ಸೀಮಿತ ಮಾಡಿರುವ ಪುರುಷ ಪ್ರಧಾನ ಸಮಾಜದಲ್ಲಿ ಅವರನ್ನು ಮುನ್ನೆಲೆಗೆ ತರುವ ಉದ್ದೇಶ ಫ್ರಲಪ್ರದಾಯಕವಾಗುತ್ತದೆ. ನಗರ ನಿವಾಸಿಗಳಲ್ಲದೆ ಹೆಚ್ಚಿನ ಮಹಿಳೆಯರು ಹಳ್ಳಿಗಳಿಂದ ಗಾರ್ಮೆಂಟ್ಸ್ ಗಳಿಗೆ ತೆರಳುತ್ತಾರೆ. ಅವರಿಗೆ ಬರುವ ಪ್ರತಿ ತಿಂಗಳ ಆದಾಯದಲ್ಲಿ ಮೂರರಿಂದ ನಾಲ್ಕು ಸಾವಿರ ಹಣವನ್ನು ಬಸ್ ಮತ್ತು ಆಟೋ ಚಾರ್ಜಿಗೇ ವ್ಯಯಿಸಬೇಕಾಗುತ್ತದೆ. ಗಳಿಸುವ 10-12 ಸಾವಿರದ ಆದಾಯದಲ್ಲಿ ಮಧ್ಯಾಹ್ನದ ಊಟ, ಆರೋಗ್ಯ, ಮನೆ, ಮಕ್ಕಳ ಖರ್ಚು ಗಳನ್ನೆಲ್ಲ ನೀಗಿಸಿಯೂ ಮಕ್ಕಳ ಭವಿಷ್ಯಕ್ಕೆ ಉಳಿತಾಯ ಮಾಡುವುದು ಕಷ್ಟ. ಈಗ ಘೋಷಿಸುಲಿರುವ ಉಚಿತ ಪ್ರಯಾಣ ಸೇವೆ ಅವರ ನೆರವಿಗೆ ಬರಲಿದೆ. ಗೃಹಿಣಿಯರು ಹೊರ ಹೋಗಬೇಕಾದರೂ ಗಂಡನ ಮುಂದೆ ಕೈಚಾಚಿ ನಿಲ್ಲಬೇಕಾಗಿತ್ತು. ಈ ಯೋಜನೆ ಅನುಷ್ಠಾನಗೊಂಡರೆ ಅವರ ಸ್ವಾವಲಂಬನೆಗೆ ಸಹಕಾರಿಯಾಗಲಿದೆ.
ಮಹಿಳೆಯರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವುದರಿಂದ ‘ದೇಶ ತಿರುಗು’ ನಾಣ್ಣುಡಿಯಂತೆ ಸಾಮಾಜಿಕ ಜ್ಞಾನ ಗಳಿಸಲೂ ಮತ್ತು ಪ್ರಜಾಪ್ರಭುತ್ವದ ಸಹಭಾಗಿತ್ವದೊಂದಿಗೆ, ಸಮಾಜದೊಂದಿಗೆ ತೆರೆದುಕೊಳ್ಳಲು ಅನುಕೂಲವಾಗುತ್ತದೆ.
ಹೆಣ್ಣು ಅಬಲೆಯಲ್ಲ ಎನ್ನುವ ಮಾತುಗಳು ಮಾತುಗಳಾಗಿಯೇ ಉಳಿದಿರುವ ಹೊತ್ತಿನಲ್ಲಿ ಅದಕ್ಕೆ ಪೂರವಾದ ಯೋಜನೆ ಇದಾಗಲಿದೆ. ಮೇಲ್ವರ್ಗದ ಮಹಿಳೆಯರು ಹಣವಿರುವ ಕಾರಣ ಯಾರನ್ನೂ ಅವಲಂಬಿಸದೇ ಇರಬಹುದು. ಆದರೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಈ ಘೋಷಣೆ ವರದಾನವಾಗಲಿದ್ದು, ಅಧ್ಯಯನಶೀಲ ಹೆಣ್ಣುಮಕ್ಕಳಿಗೆ ಬಂಪರ್ ಆಫರ್ ಕೂಡ.
ಈ ಪ್ರೋತ್ಸಾಹದಿಂದ ಒಬ್ಬೊಬ್ಬರಾಗಿಯೇ ಉದ್ಯೋಗಕ್ಕೆ ತೆರಳಲು ಉತ್ಸುಕರಾಗಿ ಮುಂದೆ ಬರುತ್ತಾರೆ. ಇದರಿಂದ ರಾಜ್ಯದ ವಿವಿಧ ಕಾರ್ಖಾನೆಗಳಲ್ಲಿ ಉತ್ಪಾದನಾ ಕಾರ್ಯವೂ ಹೆಚ್ಚ ತೊಡಗಲಿದೆ. ಉತ್ಪಾದನೆ ಹೆಚ್ಚಾದರೆ ರಾಜ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಹರಿದು ಬರುವ ಸಾಧ್ಯತೆಯೂ ಇದೆ. ತಲಾದಾಯವೂ ಹೆಚ್ಚಾಗುತ್ತದೆ. ಆರ್ಥಿಕತೆಯನ್ನು ದುಪ್ಪಟ್ಟು ಮಾಡುವ ತಂತ್ರವೂ ಇದರ ಹಿಂದೆ ಅಡಗಿದೆ.
ಜನರಿಗೆ ಬಿಟ್ಟಿ ಭಾಗ್ಯಗಳನ್ನು ನೀಡಿ ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ, ಬೊಕ್ಕಸಕ್ಕೆ ನಷ್ಟ ಉಂಟಾಗಲಿದೆ ಎಂದು ಟೀಕೆಗಳು ವಿರೋಧ ಪಕ್ಷಗಳಿಂದ ಕೇಳಿಬರುತ್ತಿವೆ. ಈ ಹಿಂದೆ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಸರ್ಕಾರ ಜನಪರ ಯೋಜನೆಗಳನ್ನು ನೀಡಿಯೂ ಹದಿಮೂರು ಬಜೆಟ್ ಮಂಡಿಸಿದ್ದು ನಮ್ಮೆಲ್ಲರ ಕಣ್ಣಮುಂದಿದೆ. ಇಂದಿನ ಸರ್ಕಾರ ಜನರ ಬಗೆಗಿನ ಕಾಳಜಿವಹಿಸಿದ್ದರೆ ಈಗಿನ ಸಾಲ 4 ಲಕ್ಷ ಕೋಟಿಯನ್ನು ದಾಟಿರುವುದೇಕೆ? ಹಾಗಾದರೆ 2.6 ಲಕ್ಷ ಕೋಟಿಗೂ ಅಧಿಕವಿರುವ ರಾಜ್ಯದ ಒಟ್ಟು ಬಜೆಟ್ ಬಳಕೆಯಾಗುತ್ತಿರುವುದು ಎಲ್ಲಿ? ಅಧಿಕಾರಿಗಳು ಮೂಟೆ ಕೊರೆಯುವ ಇಲಿಗಳಾದರೆ ರಾಜಕಾರಣಿಗಳು ಗೋಡೋನ್ ಕೊರೆಯುವ 40% ಹೆಗ್ಗಣಗಳಾಗಿದ್ದಾರೆ. ಜನರ ಜೀವನಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಬಿಟ್ಟಿ ಭಾಗ್ಯಗಳಾದರೆ ರಸ್ತೆ, ಕಟ್ಟಡಗಳನ್ನು ನಿರ್ಮಿಸುವುದೇ ಅಭಿವೃದ್ಧಿಯಾ? ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿ ಜನರನ್ನು ಭಿಕ್ಷುಕರಂತೆ ನಡೆಸಿಕೊಳ್ಳುವುದು ಅಭಿವೃದ್ಧಿಯಾ? ಖಂಡಿತಾ ಅಲ್ಲ. ಹಾಗಿದ್ದರೆ ಇಂದಿನ ಸರ್ಕಾರ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ಗಳನ್ನು ಕಡಿತ ಮಾಡುತ್ತಿರಲಿಲ್ಲ. ಬಿಟ್ಟಿ ಭಾಗ್ಯಗಳೆಂದು ಮೂದಲಿಸುವವರು ಜನರನ್ನು ಬಡವರಾಗಿಯೇ ಉಳಿಸಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಲೂಟಿ ಹೊಡೆಯುವ ಮಾರ್ಗವನ್ನು ರೂಪಿಸಿಕೊಂಡಿದ್ದಾರೆ. ಪ್ರಜೆಗಳ ಬಗ್ಗೆ ಕಾಳಜಿ ಇದ್ದವರು ನಿಜವಾಗಿಯೂ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡುತ್ತಿದ್ದರು, ಹಲವು ಇಲಾಖೆಗಳಲ್ಲಿ ಸಬ್ಸಿಡಿಗಳೇ ಕುಸಿದು ಹೋಗಿದೆ.
ಇದರಿಂದ ಅರ್ಥ ಮಾಡಿಕೊಳ್ಳಬೇಕಿರುವುದೇನೆಂದರೆ ರಾಜಕಾರಣಿಗಳು ಕೇಲವ ಪಕ್ಷದ ಕಾರಣಕ್ಕೆ ವಿರೋಧಿಸುವವರೇ ಆಗಿದ್ದಾರೆ ಎಂಬುದು. ಹಾಗಾಗಿ ನಾವು ಒಳಿತು ಕೆಡುಕುಗಳನ್ನು ಅವಲೋಕನ ಮಾಡಬೇಕಿದೆ.
(ಕೃಪೆ: e-kshana.com)