5% ಜಿಎಸ್‌ಟಿ ಪಾವತಿಸಲಿರುವ ಫುಡ್ ಡೆಲಿವರಿ ಸಂಸ್ಥೆಗಳು: ಗ್ರಾಹಕರ ಮೇಲಿನ ಪರಿಣಾಮವೇನು?
ಹೊಸದಿಲ್ಲಿ: ಶುಕ್ರವಾರ ನಡೆದ 45ನೇ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆಗಳಾದ ಝೊಮ್ಯಾಟೋ ಮತ್ತು ಸ್ವಿಗ್ಗಿ ಈಗ ಶೇ 5 ಜಿಎಸ್‍ಟಿಯನ್ನು ಸರಕಾರಕ್ಕೆ ಪಾವತಿಸಬೇಕಿದೆ.
ಆದರೆ ಜಿಎಸ್‍ಟಿ ಮಂಡಳಿಯ ನಿರ್ಧಾರದಿಂದ ತಾವು ಹೆಚ್ಚು ಪಾವತಿಸಬೇಕಿದೆಯೇ ಎಂದು ಗ್ರಾಹಕರು ಆತಂಕಿತರಾಗಿದ್ದರು. ಆದರೆ ಜಿಎಸ್‍ಟಿ ಮಂಡಳಿಯ ನಿರ್ಧಾರದಿಂದ ಗ್ರಾಹಕರು ಬಾಧಿತರಾಗುವುದಿಲ್ಲ ಎಂಬ ಸ್ಪಷ್ಟನೆ ಬಂದಿದೆ.
ಝೊಮ್ಯಾಟೋ, ಸ್ವಿಗ್ಗಿ ಯಂತಹ ಫುಡ್ ಡೆಲಿವರಿ ಸಂಸ್ಥೆಗಳು ಆಹಾರ ಡೆಲಿವರಿ ನಡೆಸುತ್ತಿರುವುದಕ್ಕೆ ಶೇ 5ರಷ್ಟು ಜಿಎಸ್‍ಟಿ ಪಾವತಿಸಬೇಕಿದೆ, ರೆಸ್ಟಾರೆಂಟುಗಳಲ್ಲ, ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಫುಡ್ ಡೆಲಿವರಿ ಸಂಸ್ಥೆಗಳು ಟ್ಯಾಕ್ಸ್ ಕಲೆಕ್ಟರ್ಸ್ ಎಟ್ ಸೋರ್ಸ್ ಆಗಿರುವುದು ಇದಕ್ಕೆ ಕಾರಣ ಎಂದೂ ಅವರು ತಿಳಿಸಿದ್ದಾರೆ.
ಗ್ರಾಹಕರು ಈಗಾಗಲೇ ಶೇ 5ರಷ್ಟು ಜಿಎಸ್‍ಟಿಯನ್ನು ರೆಸ್ಟಾರೆಂಟುಗಳಿಗೆ ಪಾವತಿಸುವುದರಿಂದ ಜನವರಿ 1ರಿಂದ ಫುಡ್ ಡೆಲಿವರಿ ಸಂಸ್ಥೆಗಳು ಮತ್ತು ಕ್ಲೌಡ್ ಕಿಚನ್‍ಗಳು ಶೇ 5 ಜಿಎಸ್‍ಟಿ ಪಾವತಿಸಬೇಕಿದೆ.
ಫುಡ್ ಡೆಲಿವರಿಗಳಿಗೆ ಜಿಎಸ್‍ಟಿ ಪಾವತಿಯನ್ನು ಹಲವು ರೆಸ್ಟಾರೆಂಟುಗಳನ್ನು ತಪ್ಪಿಸಿಕೊಳ್ಳುತ್ತಿರುವುದರಿಂದ ಈ ಕ್ರಮಕೈಗೊಳ್ಳಲಾಗುತ್ತದೆ.
“ಇಲ್ಲಿಯ ತನಕ ರೆಸ್ಟಾರೆಂಟುಗಳಿಗೆ ಶೇ 5ರಷ್ಟು ತೆರಿಗೆ ಪಾವತಿಸುತ್ತಿದ್ದ ಗ್ರಾಹಕರು ಈಗ ಫುಡ್ ಡೆಲಿವರಿ ಸಂಸ್ಥೆಗಳಿಗೆ ಅವುಗಳನ್ನು ಪಾವತಿಸಲಿದ್ದಾರೆ” ಎಂದು ಸಚಿವೆ ತಿಳಿಸಿದ್ದಾರೆ.