ಇಡಾ’ ಚಂಡಮಾರುತಕ್ಕೆ ನಲುಗಿದ ನ್ಯೂಯಾರ್ಕ್… 40ಕ್ಕೂ ಹೆಚ್ಚು ಮಂದಿ ದುರ್ಮರಣ

ಇಡಾ’ ಚಂಡಮಾರುತಕ್ಕೆ ನಲುಗಿದ ನ್ಯೂಯಾರ್ಕ್… 40ಕ್ಕೂ ಹೆಚ್ಚು ಮಂದಿ ದುರ್ಮರಣ

 

ನ್ಯೂಯಾರ್ಕ್:ಇಡಾ ಚಂಡಮಾರುತ ಉಂಟುಮಾಡಿದ ಅನಾಹುತದಿಂದ ಅಮೆರಿಕದ ನ್ಯೂಯಾರ್ಕ್ ನಗರದ ತತ್ತರಿಸಿ ಹೋಗಿದೆ. ಗುರುವಾರ ರಾತ್ರಿಯಿಡೀ ಸುರಿದ ಭಾರಿ ಮಳೆ, ಗಾಳಿಯ ಪರಿಣಾಮ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕನಿಷ್ಠ 44 ಮಂದಿ ಬಲಿಯಾಗಿದ್ದಾರೆ. ಕಟ್ಟಡಗಳ ಅವಶೇಷಗಳೇ ಹೆಚ್ಚಿನ ಜನರನ್ನು ಬಲಿಪಡೆದುಕೊಂಡಿವೆ. ಕೆಲವರು ಕಟ್ಟಡಗಳ ನೆಲಮಾಳಿಗೆಯಲ್ಲಿ ಅಪ್ಪಚ್ಚಿಯಾಗಿದ್ದಾರೆ.

ಹವಾಮಾನ ವೈಪರೀತ್ಯದ ಪರಿಣಾಮ ಇದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇದು ‘ಐತಿಹಾಸಿಕ’ ಹವಾಮಾನ ಸನ್ನಿವೇಶ ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಈ ಪ್ರಮಾಣದ ಮಳೆ ಮತ್ತು ಪ್ರವಾಹವನ್ನು ನ್ಯೂಯಾರ್ಕ್ ಜನತೆ ಹಿಂದೆಂದೂ ಕಂಡಿರಲಿಲ್ಲ ಎನ್ನಲಾಗಿದೆ.

 

ನ್ಯೂಯಾರ್ಕ್ ನಗರದಲ್ಲಿ ಸುರಿದಿರುವ ದಾಖಲೆಯ ಮಳೆ ಅಭೂತಪೂರ್ವ ಹಠಾತ್ ಪ್ರವಾಹಕ್ಕೆ ಕಾರಣವಾಗಿದೆ. ರಸ್ತೆಗಳೇ ನದಿಗಳಾಗಿ ಪರಿವರ್ತನೆಯಾಗಿವೆ. ಸಬ್‌ವೇಗಳಲ್ಲಂತೂ ನೀರು ತುಂಬಿಕೊಂಡಿದ್ದು, ಅತ್ತ ಸಾಗುವುದೇ ಅಸಾಧ್ಯವಾಗಿದೆ.

‘ನನಗೆ 50 ವರ್ಷ ವಯಸ್ಸು. ಇಷ್ಟು ವರ್ಷಗಳಲ್ಲಿ ಇಂತಹ ಮಳೆಯನ್ನು ಎಂದಿಗೂ ನೋಡಿರಲಿಲ್ಲ. ನಾವು ಕಾಡಿನಲ್ಲಿ ವಾಸಿಸುತ್ತಿದ್ದೇವೇನೋ ಎಂದೆನಿಸಿದೆ. ಇದು ಉಷ್ಣವಲಯದ ಮಳೆಯಂತೆ ಸುರಿದಿದೆ. ನಂಬಲಾಗುತ್ತಿಲ್ಲ. ಈ ವರ್ಷ ಎಲ್ಲವೂ ವಿಚಿತ್ರವಾಗಿದೆ’ ಎಂದು ಮೆಟೊದಿಜಾ ಮಿಹಾಜ್ಲೊವ್ ತಿಳಿಸಿದರು. ಅವರ ಮ್ಯಾನ್‌ಹಟನ್ ರೆಸ್ಟೋರೆಂಟ್‌ನ ನೆಲ ಮಹಡಿಯು ಮೂರು ಇಂಚ್‌ನಷ್ಟು ನೀರಿನಿಂದ ಆವೃತವಾಗಿದೆ.

 

ಲಾ ಗಾರ್ಡೇನಿಯಾ ಮತ್ತು ಜೆಎಫ್‌ಕೆ ವಿಮಾನ ನಿಲ್ದಾಣಗಳಿಂದ ನೂರಾರು ವಿಮಾನಗಳ ಸಂಚಾರ ರದ್ದುಗೊಂಡಿವೆ. ನ್ಯೂವಾರ್ಕ್‌ನಿಂದಲೂ ವಿಮಾನ ಹಾರಾಟ ನಡೆಯುತ್ತಿಲ್ಲ. ಅಲ್ಲಿನ ಟರ್ಮಿನಲ್‌ಗಳಲ್ಲಿ ಮಳೆ ನೀರು ತುಂಬಿಕೊಂಡಿದೆ.

 

ದಕ್ಷಿಣ ರಾಜ್ಯ ಲೂಸಿಯಾನಾಕ್ಕೆ ಶುಕ್ರವಾರ ಭೇಟಿ ಮಾಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಜೋ ಬೈಡನ್, ‘ನಾವು ಈ ಸಮಯದಲ್ಲಿ ಜತೆಯಾಗಿದ್ದೇವೆ. ಸಹಾಯ ಮಾಡಲು ದೇಶ ಸಿದ್ಧವಾಗಿದೆ’ ಎಂದಿದ್ದಾರೆ.

ನ್ಯೂ ಜೆರ್ಸಿ ಮತ್ತು ನ್ಯೂಯಾರ್ಕ್‌ನಲ್ಲಿ ಎಲ್ಲ ಪ್ರಮುಖ ರಸ್ತೆಗಳಲ್ಲಿಯೂ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇನ್ನು ಕೆಲವು ಪ್ರಯಾಣಿಕರಿದ್ದ ಕಾರುಗಳೊಳಗೆ ನೀರು ನುಗ್ಗಿದ್ದರಿಂದ ಅವರು ಹೊರಗೆ ಬರಲಾಗದೆ, ಒಳಗೂ ಇರಲಾಗದೆ ಪರದಾಡಿದ್ದಾರೆ. ಅಂತಹ ನೂರಾರು ಮಂದಿಯನ್ನು ರಕ್ಷಿಸಲಾಗಿದೆ.

 

ನ್ಯೂ ಜೆರ್ಸಿಯಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಎಂದು ಗವರ್ನರ್ ಫಿಲ್ ಮರ್ಫಿ ಹೇಳಿದ್ದಾರೆ. ಈ ಸಾವುಗಳಲ್ಲಿ ಬಹುಪಾಲು ಮಂದಿ ತಮ್ಮ ವಾಹನಗಳ ಒಳಗೆ ಸಿಲುಕಿಯೇ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

ನ್ಯೂಯಾರ್ಕ್ ನಗರದಲ್ಲಿ ಕೆಳ ಪ್ರದೇಶಗಳಲ್ಲಿ ವಾಸಿಸುತ್ತಿದ್ದ 11 ಮಂದಿ ಮೃತರಾಗಿದ್ದು, ಒಟ್ಟು 13 ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ. ಕೆಳ ಹಂತದಲ್ಲಿ ವಾಸಿಸುವವರು ಹಠಾತ್ ಪ್ರವಾಹದಿಂದ ಹೆಚ್ಚು ಅಪಾಯಕ್ಕೆ ಸಿಲುಕಿದ್ದಾರೆ. ಈ ಭಾಗಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅವರೆಲ್ಲರೂ ಕಾರ್ಮಿಕ ವರ್ಗದವರು, ವಲಸಿಗರು ಮತ್ತು ಕಡಿಮೆ ಆದಾಯದ ಜನರಾಗಿದ್ದಾರೆ ಎಂದು ಹೇಳಿದ್ದಾರೆ.

 

ಕಳೆದ ನಾಲ್ಕೈದು ದಿನಗಳಿಂದ ಮಳೆ, ಭಾರಿ ಗಾಳಿಯಿಂದ ಕಂಗಾಲಾಗಿದ್ದ ಜನರು ಗುರುವಾರ ಬೆಳಿಗ್ಗೆ ತಿಳಿ ನೀಲಿ ಆಕಾಶವನ್ನು ಕಂಡು ಸಹಜ ಜೀವನ ಆರಂಭವಾಗಲಿದೆ ಎಂದು ಖುಷಿಯಾಗಿದ್ದರು. ಆದರೆ ರಾತ್ರಿ ವೇಳೆಯ ಪ್ರಕೃತಿಯ ಅಬ್ಬರ ಮತ್ತೆ ಯಥಾಪ್ರಕಾರವಾಗಿತ್ತು.

ಪೆನ್ಸಿಲ್ವೇನಿಯಾದಲ್ಲಿ ಸುಮಾರು 38,000, ನ್ಯೂ ಜೆರ್ಸಿಯಲ್ಲಿ 24,000 ಹಾಗೂ ನ್ಯೂಯಾರ್ಕ್‌ನಲ್ಲಿ ಸುಮಾರು 12,000 ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ, ಕಗ್ಗತ್ತಲಲ್ಲಿಯೇ ಜನರು ದಿನ ಕಳೆದಿದ್ದಾರೆ. ಆದರೆ ಎರಡು ದಿನಗಳ ಹಿಂದಿಗಿಂತ ಪರಿಸ್ಥಿತಿ ಈಗ ಸುಧಾರಿಸಿದೆ.

 

ಹವಾಮಾನ ವೈಪರೀತ್ಯದ ಕಾರಣದಿಂದ ಸಮುದ್ರದ ನೀರು ಬಿಸಿಯಾಗುತ್ತಿದೆ. ಈ ಬಿಸಿಯಾಗುವಿಕೆ ಚಂಡಮಾರುತಗಳ ಸೃಷ್ಟಿಗೆ ಕಾರಣವಾಗುತ್ತಿದೆ. ಈ ಪ್ರಕರಣಗಳು ಹೆಚ್ಚುತ್ತಿದ್ದು, ಜಗತ್ತಿನ ಕರಾವಳಿಗಳಿಗೆ ಮಾರಕವಾಗಿ ಪರಿಣಮಿಸುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!