ಮುಂದಿನ ಐದು ವರ್ಷದವರೆಗೆ ಯಾವ ಪಕ್ಷ ಅಧಿಕಾರದಲ್ಲಿರಬೇಕೆಂಬ ತೀರ್ಮಾನ ಮಾಡಿ* *ಸಿಎಂ ಸಿದ್ದರಾಮಯ್ಯ

ಮುಂದಿನ ಐದು ವರ್ಷದವರೆಗೆ ಯಾವ ಪಕ್ಷ ಅಧಿಕಾರದಲ್ಲಿರಬೇಕೆಂಬ ತೀರ್ಮಾನ ಮಾಡಿ-ಸಿಎಂ

ತುಮಕೂರು : :ಮುಂದಿನ ಐದು ವರ್ಷದವರೆಗೆ ಯಾವ ಪಕ್ಷ ಅಧಿಕಾರದಲ್ಲಿರಬೇಕೆಂಬ ತೀರ್ಮಾನವನ್ನು ಜನತೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

 

 

ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡ ರವರ ಪರವಾಗಿ ಮತ ಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

 

 

26 ರಂದು ಜನ ಮಾಡುವ ತೀರ್ಮಾನ ದೇಶದ ಹಿತದಷ್ಟಿಯಿಂದ ಮಹತ್ವವಾದುದು. ಮುಂದಿನ ಐದು ವರ್ಷದವರೆಗೆ ಯಾವ ಪಕ್ಷ ಅಧಿಕಾರದಲ್ಲಿರಬೇಕೆಂಬ ತೀರ್ಮಾನವನ್ನು ನೀವು ಮಾಡಬೇಕು. ನಿಮ್ಮನ್ನು ಮುನ್ನಡೆಸಲು ಯಾರಿಗೆ ಯೋಗ್ಯತೆ ಇದೆ ಎಂದು ನಿಮ್ಮ ಮತದ ಮೂಲಕ ನಿರ್ಧರಿಸಬೇಕು. ಸಂಸತ್ತಿನಲ್ಲಿ ನಿಮ್ಮ ಧ್ವನಿಯನ್ನು ಸಮರ್ಥವಾಗಿ ಪ್ರತಿನಿಧಿಸುವ ಸಂಸತ್ತಿಗೆ ಹೋಗಬೇಕು. ರಾಜ್ಯದ ಹಿತ ಕಾಪಾಡುವವರು ಸಂಸತ್ತಿನಲ್ಲಿದ್ದರೆ ರಾಜ್ಯಕ್ಕೆ ಹಿತ ಎಂದರು.

 

*ತೆರಿಗೆ ಹಂಚಿಕೆಯಲ್ಲಿ ದೊಡ್ಡ ಅನ್ಯಾಯ*

ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ದೊಡ್ಡ ಅನ್ಯಾಯವಾಗಿದೆ. 15 ನೇ ಹಣಕಾಸು ಆಯೋಗ 5495 ಕೋಟಿ ಅನುದಾನ ಶಿಫಾರಸ್ಸು ಮಾಡಿದರೆ ನಿರ್ಮಲಾ ಸೀತಾರಾಮನ್ ಇದನ್ನು ಕೊಡಲು ಬರೋಲ್ಲ ಎಂದು ಕೊಡಲಿಲ್ಲ. ಪೆರಿಫೆರಲ್ ರಿಂಗ್ ರೋಡ್, ಹಾಗೂ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಶಿಫಾರಸ್ಸು ಮಾಡಿದ್ದ ತಲಾ 3000 ಕೋಟಿ ರೂ ಸೇರಿದಂತೆ ಒಟ್ಟು 11495 ಕೋಟಿ ರೂಪಾಯಿ ರಾಜ್ಯಕ್ಕೆ ಬರಲಿಲ್ಲ. ಕರ್ನಾಟಕಕ್ಕೆ ಏನೂ ಕೊಡಬೇಕಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಿದ್ದಾರೆ ಎಂದರು.

 

*ಬಿಜೆಪಿಯಿಂದ ಮಲತಾಯಿ ಧೋರಣೆ*

 

ಭದ್ರಾ ಮೇಲ್ಡಂಡೆ ಯೋಜನೆಗೆ 5300 ಕೋಟಿ ರೂ. ಬಜೆಟ್ನಲ್ಲಿ ಇರುವುದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿದ್ದರೂ , ಇದುವರೆಗೆ ಒಂದು ರೂಪಾಯಿಯನ್ನೂ ರಾಜ್ಯದ ಈ ಯೋಜನೆಗೆ ನೀಡಲಿಲ್ಲ. ಇದು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತೋರಿಸುತ್ತಿರುವ ಮಲತಾಯಿ ಧೋರಣೆ. ಆದ್ದರಿಂದ ರಾಜ್ಯದ ಪರವಾಗಿ ಧ್ವನಿಎತ್ತುವ ಸಂಸದರನ್ನು ಆಯ್ಕೆ ಮಾಡಿಕಳುಹಿಸಬೇಕು ಎಂದರು.

 

*ಸೋಮಣ್ಣ ವಸತಿಸಚಿವರಾಗಿ ಸಂಪೂರ್ಣ ವಿಫಲ*

 

ಸೋಮಣ್ಣನವರು ಉತ್ತಮ ಸಂಸದನಾಗಿ ಕೆಲಸಮಾಡುವುದಾಗಿ ಹೇಳುತ್ತಾರೆ. ಆದರೆ ಅವರು ವಸತಿ ಸಚಿವರಾಗಿದ್ದಾಗ ತುಮಕೂರಿಗೆ ಎಷ್ಟು ಮನೆಗಳನ್ನು ನೀಡಿದಿರಿ ಎಂದು ಇಲ್ಲಿನ ಜನರಿಗೆ ದಾಖಲಾತಿ ನೀಡಿ. ನಿಮ್ಮ ಅವಧಿಯಲ್ಲಿ ಒಂದೂ ಮನೆಯನ್ನು ಕಟ್ಟಲಿಲ್ಲವೇಕೆ ಎಂಬ ನಮ್ಮ ಪ್ರಶ್ನೆಗೆ ಅವರ ಬಳಿ ಅಂದು ಉತ್ತರವಿರಲಿಲ್ಲ. ಆದ್ದರಿಂದ ವಸತಿ ಸಚಿವರಾಗಿ ವಿಫಲವಾಗಿರುವ ಸೋಮಣ್ಣನವರ ಉತ್ತಮವಾಗಿ ಕೆಲಸ ಮಾಡುತ್ತೇನೆ ಎನ್ನುವ ಮಾತು ಸಂಪೂರ್ಣ ಸುಳ್ಳು ಎಂದರು.

 

*2014 ರಿಂದ ಮೋದಿಯವರು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ*

 

ಕಳೆದ ಹತ್ತು ವರ್ಷದಿಂದ ಪ್ರಧಾನಿ ಮೋದಿಯವರು ಸಮಾಜದ ಯಾವ ವರ್ಗಕ್ಕೂ ಯಾವುದೇ ಕೆಲಸ ಮಾಡಲಿಲ್ಲ. ಜನರ ಖಾತೆಗೆ 15 ಲಕ್ಷ ಹಾಕಲಿಲ್ಲ. 2014ರಂದು ಮೋದಿಯವರು ಸುಳ್ಳು ಆಶ್ವಾಸನೆಗಳನ್ನು ನಿಡಿದ್ದಾರೆ. ನಿರುದ್ಯೋಗಿಗಳಿಗೆ 20 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಯುವಜನರಿಗೆ ಪಕೋಡಾ ಮಾರುವಂತೆ ಹೇಳಿದ ಮೋದಿಯವರು ಪ್ರಧಾನಿಯಾಗಲು ಯೋಗ್ಯರೇ ಎಂದು ನೀವೇ ನಿರ್ಧರಿಸಬೇಕು ಎಂದರು.

 

 

*ಬಿಜೆಪಿಯಿಂದ ರಾಜ್ಯದ ಜನರಿಗೆ ‘ಖಾಲಿ ಚೊಂಬು’*

 

ಅಗತ್ಯವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪೆಟ್ರೋಲ್, ಡೀಸೆಲ್, ಆಹಾರ ಪದಾರ್ಥಗಳು, ಗ್ಯಾಸ್ ಸೇರಿದಂತೆ ಎಲ್ಲದರ ಬೆಲೆಗಳು ಇಳಿಯಲಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲಿಲ್ಲ. ಸಾಲಮನ್ನಾ , ಬೆಳೆಗಳಿಗೆ ನ್ಯಾಯಯುವ ಬೆಲೆ ನೀಡುವ ಅನುಕೂಲತೆ ಮಾಡಲಿಲ್ಲ. 2014ರಲ್ಲಿ ಡಾಲರ್ ಬೆಲೆ 58 ರೂ. , ಆದರೆ ಇಂದು ಒಂದು ಡಾಲರ್ ಬೆಲೆ 83 ರೂ.ಆಗಿದ್ದು, ಮೋದಿಯವರು ಜನರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ . ಈ ರೀತಿ ಬಿಜೆಪಿಯವರು ರಾಜ್ಯದ ಜನರಿಗೆ ಖಾಲಿ ಚೊಂಬನ್ನು ನೀಡಿದ್ದಾರೆ. ಆದರೆ ದೇವೇಗೌಡರು ಖಾಲಿ ಚೊಂಬನ್ನು ಅಕ್ಷಯಪಾತ್ರೆಯೆಂದು ಸುಳ್ಳು ಹೇಳುತ್ತಿದ್ದಾರೆ ಬಿಜೆಪಿಯೊಂದು ಕೋಮುವಾದಿ ಪಕ್ಷ ಎಂದರು.

 

*ರಾಜ್ಯದ ಹಿತ ಕಾಪಾಡುವವ ರನ್ನು ಗೆಲ್ಲಿಸಿ*

 

223 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದು ಸೆಪ್ಟೆಂಬರ್ ನಲ್ಲಿ ಮನವಿ ಸಲ್ಲಿಸಿದ್ದು, ಅಕ್ಟೋಬರ್ ನಲ್ಲಿ ವರದಿ ಸಲ್ಲಿಸಿದ್ದರೂ ಕೇಂದ್ರ ತಂಡ ವರದಿ ಕೊಟ್ಟ ಒಂದು ತಿಂಗಳಲ್ಲಿ ಪರಿಹಾರ ನೀಡಬೇಕೆಂಬ ಕಾನೂನು ಇದ್ದರೂ ಒಂದು ರೂ. ಕೊಟ್ಟಿಲ್ಲ. ಅಮಿತ್ ಶಾ ವರದಿ ಕೊಟ್ಟಿದ್ದೇ ತಡವಾಗಿ ಎಂದು ಅಪ್ಪಟ ಸುಳ್ಳು ಹೇಳುತ್ತಾರೆ ಎಂದರು. ಈ ಅನ್ಯಾಯದ ಬಗ್ಗೆ ಮಾತನಾಡುವ ಧೈರ್ಯ 25 ಲೋಕಸಭಾ ಸದಸ್ಯ ರಿಗೂ ಇಲ್ಲ ಎಂದರು. ಇಂಥವರು ರಾಜ್ಯದ ಹಿತವನ್ನು ಕಾಪಾಡಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

 

ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ನರೇಂದ್ರ ಮೋದಿ ಯವರನ್ನು ಹಾಡಿ ಹೊಗಳುವ ಮಟ್ಟಕ್ಕೆ ಹೋದರೆಂದು ವ್ಯಥೆ ಯಾಗುತ್ತಿದೆ ಎಂದರು.

 

*ನಮ್ಮಲ್ಲಿ ಪ್ರಧಾನಿಯಾಗುವ ಯೋಗ್ಯತೆ ಇರುವ ಬಹಳಷ್ಟು ಜನರಿದ್ದಾರೆ*

 

ದೇವೇಗೌಡರು ದೇಶದ ಪ್ರಧಾನಿಯಾಗುವಾಗ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿರಲಿಲ್ಲ. ಅದೃಷ್ಟದಿಂದ ಪ್ರಧಾನಿಯಾದರು. ರಾಹುಲ್ ಗಾಂಧಿ ನರೇಂದ್ರ ಮೋದಿ ಯವರಿಗಿಂತ ಕಡಿಮೆ ಏನಿಲ್ಲ. ನಮ್ಮಲ್ಲಿ ಪ್ರಧಾನಿಯಾಗುವ ಯೋಗ್ಯತೆ ಇರುವ ಬಹಳಷ್ಟು ಜನರಿದ್ದಾರೆ. ನರೇಂದ್ರ ಮೋದಿ ಅವರನ್ನು ಬಿಟ್ಟರೆ ಯಾರಿಲ್ಲ ಎನ್ನುತ್ತಾರೆ. ಒಂದು ಕಾಲದಲ್ಲಿ ನೆಹರೂ ಅವರ ನಂತರ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನ್ ಮೋಹನ್ ಸಿಂಗ್ ಅವರು ಉತ್ತಮ ಕೆಲಸ ಮಾಡಲಿಲ್ಲವೇ? ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ಬಿಟ್ಟರೆ ಪ್ರಧಾನಿಯಾಗಲು ಯಾರೂ ಇಲ್ಲ ಎಂದು ದೇವೇಗೌಡರು ಸ್ವಾರ್ಥಕ್ಕಾಗಿ ಹೇಳುವ ಮಾತುಗಳು ಎಂದರು. ಇದು ಅವರಿಗೆ ಶೋಭೆ ಕೊಡುವ ಮಾತುಗಳಲ್ಲ ಎಂದರು.

 

 

*ಸುಳ್ಳು ಹೇಳುವವರನ್ನು ತಿರಸ್ಕರಿಸಿ*

ಬೆಲೆಯೇರಿಕೆಯಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ.

ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಾವು ಸತ್ಯ ಹೇಳುತ್ತಿದ್ದೇವೆ, ಬಿಜೆಪಿ ಸುಳ್ಳು ಹೇಳುತ್ತಿದೆ. ಸುಳ್ಳು ಹೇಳುವವರನ್ನು ತಿರಸ್ಕಾರ ಮಾಡಬೇಕು ಎಂದು ಕರೆ ನೀಡಿದರು. ನುಡಿದಂತೆ ನಡೆದಿದ್ದೇವೆ. ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಬಜೆಟ್ ನಲ್ಲಿ 52000 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ನಮ್ಮ ಅಭ್ಯರ್ಥಿಯನ್ನು ಆಶೀರ್ವಾದ ಮಾಡಿ ಲೋಕಸಭೆಗೆ ಕಳಿಸಿಕೊಡಬೇಕೆಂದು ಹೇಳಿದರು.

 

 

ಸಚಿವರಾದ ಪರಮೇಶ್ವರ್, ಕೆ.ಎ ನ್.ರಾಜಣ್ಣ, ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರೇಖರ ಗೌಡ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!