ತುಮಕೂರಿನ ಬುದ್ಧ ವಿಹಾರದಲ್ಲಿ ಬೌದ್ಧ ಧರ್ಮ ಸ್ವೀಕಾರ ಕಾರ್ಯಕ್ರಮ

ತುಮಕೂರು ಹೊರವಲಯದ ಧಮ್ಮಲೋಕ ಬುದ್ದ ವಿಹಾರದಲ್ಲಿ ಸಂಭ್ರಮ ಮನೆ ಮಾಡಿತ್ತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ದಲಿತರು ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸಿದರು. ಪುರುಷರು, ಮಹಿಳೆಯರು ಮತ್ತು ಮಕ್ಕಳು ಬೌದ್ಧ ಧಮ್ಮ ಸ್ವೀಕರಿಸಿ ಸಂಭ್ರಮಿಸಿದರು. ಭಂತೇಜಿಗಳು ಮತ್ತು ಬಿಕ್ಕುಗಳು ಬೌದ್ಧ ಧಮ್ಮದ ಪಂಚಶೀಲ ತತ್ವಗಳನ್ನು ಬೋಧಿಸಿದರು.

ವಿಶ್ವ ಬೌದ್ಧ ಧರ್ಮ ಸಂಘ, ಸಮತ ಸೈನಿಕ ದಳ, ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಹಾಗೂ ಹಲವು ದಲಿತ ಸಂಘಟನೆಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 250 ಕ್ಕೂ ಹೆಚ್ಚು ಮಂದಿ ದಲಿತರು ಬೌದ್ಧ ಧರ್ಮವನ್ನು ಅಪ್ಪಿಕೊಂಡರು. ಡಾ. ಸುರೇಂದ್ರ ಅವರು ಬೌದ್ಧ ಭಿಕ್ಷೆ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮದ ಕುರಿತು ಹೇಳಿರುವ 21 ತತ್ವಗಳನ್ನು ಬೋಧಿಸಲಾಯಿತು.

ಭಂತೇಜಿಗಳು ಮತ್ತು ಬಿಕ್ಕುಗಳು ಧಮ್ಮ ಪದಗಳನ್ನು ಹಾಡಿದರು. ಸಭಿಕರೂ ಕೂಡ ಬಿಕ್ಕುಗಳ ಹಾಡಿಗೆ ದನಿ ಗೂಡಿಸಿದರು. ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಮತಾ ಸೈನಿಕ ದಳದ ರಾಜ್ಯಧ್ಯಕ್ಷ ಎಂ. ವೆಂಕಟಸ್ವಾಮಿ ಸೇರಿದಂತೆ ಹಲವು ಮುಖಂಡರು ಧಮ್ಮ ಪ್ರಾರ್ಥನೆ ಮಾಡಿದರು. ಪ್ರಶಾಂತವಾದ ವಾತಾವರಣದಲ್ಲಿ ಧಮ್ಮ ಪದಗಳು ಮೊಳಗಿದವು.

ಕಾರ್ಯಕ್ರಮಕ್ಕೂ ಮೊದಲು ಗೆದ್ದಲಹಳ್ಳಿಯ ಗೇಟಿನಿಂದ ಧಮ್ಮಲೋಕ ಬುದ್ದ ವಿಹಾರದವರೆಗೆ ಮರೆವಣಿಗೆ ನಡೆಸಲಾಯಿತು. ನಂತರ ನಡೆದ ಧಮ್ಮ ದೀಕ್ಷಾ ಸಮಾರಂಭವನ್ನು ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು. ಇದೇ ಮೊದಲ ಬಾರಿಗೆ ಭೇಟಿ ನೀಡಿ ಬುದ್ದ ವಿಹಾರ ನಿರ್ಮಾಣಕ್ಕೆ ಶ್ರಮಿಸಿದವರನ್ನು ಅಭಿನಂದಿಸಿದರು.

ಬಳಿಕ ಮಾತನಾಡಿದ ಪರಮೇಶ್ವರ್ ಪರಿವರ್ತನೆಗೆ ಕಾಲ ಕೂಡಿ ಬಂದಿದೆ. ಬೌದ್ಧ ಧಮ್ಮದ ದೀಕ್ಷೆ ಪಡೆಯಬೇಕು ಎಂಬ ವಿಶ್ವಾಸ ಬಂದಿರುವುದು ಒಳ್ಳೆಯ ಬೆಳವಣಿಗೆ. ಇಂದು ವಿದ್ಯಾವಂತರು ಹೆಚ್ಚು ಬೌದ್ಧ ಧರ್ಮದ ಕಡೆ ಒಲವು ತೋರುತ್ತಿದ್ದಾರೆ. ಆದರೆ ಅವಿದ್ಯಾವಂತರು ಈ ಬಗ್ಗೆ ಒಲವು ತೋರುತ್ತಿಲ್ಲ. ಆದರೆ ಅವರ ಮಕ್ಕಳು ಧಮ್ಮದ ಬಗ್ಗೆ ಒಲವು ತೋರುತ್ತಿರುವುದು ಸಂತಸದ ಸಂಗತಿ. ಧಮ್ಮವನ್ನು ಸ್ವೀಕರಿಸಿದರಷ್ಟೇ ಸಾಲದು ಅದನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಬುದ್ದನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಬೌದ್ಧ ಧರ್ಮ ವಿಶ್ವಾದ್ಯಂತ ಹರಡಿದ್ದು ಜನರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಿದೆ. ಧಮ್ಮದ ಬೆಳಕಿನಲ್ಲಿ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಲಿತ ಮುಖಂಡ ಸಿ.ಭಾನುಪ್ರಕಾಶ್ ಶ್ರೀನಿವಾಸ್ , ಕೃಷ್ಣಪ್ಪ ಜೆಸಿಬಿ ವೆಂಕಟೇಶ್, ಕುಣಿಗಲ್ ನಟರಾಜ್, ಪಾವಗಡ ಶ್ರೀರಾಮ್ ,ಬುದ್ಧ ವಿಹಾರದ  ಹನುಮಂತರಾಯಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!